March 16, 2021
Public Voice
ಪ್ರಧಾನ ಸುದ್ದಿ ಮುಖ್ಯಾಂಶಗಳು ಶಿವಮೊಗ್ಗ ಸಾಹಿತ್ಯ/ಸಂಸ್ಕೃತಿ

ರಾಷ್ಟ್ರಕವಿ ಕುವೆಂಪುರವರ  ಜನ್ಮ ದಿನದ ವಿಶೇಷ ಲೇಖನ: ಕುವೆಂಪು ಎಂಬ ದಾರ್ಶನಿಕ…

ಡಾ.ಜಿ.ಪ್ರಶಾಂತ ನಾಯಕ್, ಸಾಹಿತಿಗಳು ಹಾಗೂ ಪ್ರಾಧ್ಯಾಪಕರು.

ಕುವೆಂಪು ಕುರಿತು ಮಾತನಾಡುವ ಹೊತ್ತಿಗೆ ಅವರನ್ನು ಕುರಿತಂತೆ ‘ಅಪರೂಪದ ಪ್ರತಿಭೆ’ ಎನ್ನುವ ಮಾತನ್ನು ಬಳಸಿದರೆ ಅದು ಇತರ ಕನ್ನಡದ ಯಾವುದೇ ಕವಿಗೆ ಬಳಸುವ ಸಾಮಾನ್ಯತೆಯ ಅರ್ಥದಲ್ಲಿ ಅಲ್ಲ ಅದನ್ನು ಒಂದು ಐತಿಹಾಸಿಕ ವಿಶೇಷತೆಯ ಅರ್ಥದಲ್ಲಿಯೇ ಪರಿಗಣಿಸಿ ಚರ್ಚಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಕುವೆಂಪು ಒಬ್ಬ ಸಮಗ್ರ ಸಾಹಿತಿಯ ಅರ್ಥದಲ್ಲಿ ಅಲ್ಲದೆ ಈ ನೆಲದ ಸಾಮಾಜಿಕ ನ್ಯಾಯದ ಮಹತ್ವದ ಪರಿಕಲ್ಪನೆಯ ಒಬ್ಬ ಮಹಾನ್ ಚಿಂತಕನಾಗಿಯೂ ಕಾಣಿಸಿಕೊಳ್ಳುತ್ತಾರೆ. ಒಂದೋ ಎರಡೋ ಕವಿತೆ, ಕತೆ ಎನ್ನುವ ಬೀಸು ಹೇಳಿಕೆಯಂತಾಗಲಿ, ವಾದಗಳಂತಾಗಲೀ ಅವರು ಚಿಂತನೆಯನ್ನು ಮಂಡಿಸುವುದಿಲ್ಲ. ಅದಕ್ಕೊಂದು ನಿಜದ ನೆಲೆಯ ‘ದರ್ಶನ’ವಿದೆ. ಅದು ನಿನ್ನೆಗಳನ್ನು ನೋಡುತ್ತಲೇ ನಾಳೆಗೂ ಚಿಂತಿಸಬಹುದಾದ ಇಂದಿನ ‘ವಾಸ್ತವ’ವನ್ನು ಕುರಿತದ್ದು.

ವರ್ಣಾಶ್ರಮವನ್ನು ಆರಾಧನೆಯ ಎತ್ತರಕ್ಕೆ ಒಯ್ದು, ಅದಕ್ಕೆ ತಕ್ಕಂತೆ ನಿಯಮಗಳೆಂದೇ ರೂಪಿಸಿ, ಅವೈಜ್ಞಾನಿಕ, ಅವೈಚಾರಿಕ ಭಾವಗಳನ್ನೆಲ್ಲಾ ದೈವೀಕವೆನಿಸಿ ಸಾಮಾನ್ಯ ಮನುಷ್ಯರ ಬದುಕಿನಲ್ಲಿ ಅಸಮಾನತೆಯನ್ನು ಉಂಟುಮಾಡಿದ ‘ವ್ಯವಸ್ಥೆ’ಯೊಂದು ಕ್ರಿಯಾಶೀಲವಾಗಿರುವ ಭಾರತದಂತಹ ನೆಲದಲ್ಲಿ ಒಬ್ಬ ಕವಿ ಕೇವಲ ಕಲ್ಪನೆಯ ವಸ್ತುವನ್ನು ಕಾವ್ಯವನ್ನಾಗಿಸುವ ನೆಲೆ ಒಂದೆಡೆಯಾದರೆ, ಮತ್ತೊಂದೆಡೆ ಮಹಾಮಾರ್ಗವಾದದ್ದು, ಧರ್ಮದ ಬಿತ್ತರದಲ್ಲಿ ‘ನಿಯಮ’ಗಳ ರೂಪದಲ್ಲಿ ಕಾವ್ಯ ಸೃಷ್ಟಿಗೆ ತೊಡಗಿಸಿಕೊಂಡ ವ್ಯವಸ್ಥೆ. ಈ ಕಾರಣದಿಂದಲೂ ವ್ಯಷ್ಟಿಯಿಂದ ಆರಂಭವಾಗಿ ಸಮಷ್ಟಿಯಾಗಬಹುದಾದ ಬಹಳಷ್ಟು ಸಾಧ್ಯತೆಗಳೂ ದ್ವಂದ್ವದಲ್ಲಿಯೇ ಉಳಿದುಹೋದವು ಎನ್ನುವುದು ಮುಖ್ಯ. ಭಾರತೀಯ ಕಾವ್ಯ ಪರಂಪರೆಯ ಬಹುದೊಡ್ಡ ಸೃಷ್ಟಿಗಳಿಗೂ ಈ ದ್ವಂದ್ವದ ಅಪವಾದದಿಂದ ಪಾರಾಗುವುದು ಸಾಧ್ಯವಾಗಲಿಲ್ಲ ಎನ್ನುವುದೇ ‘ವ್ಯವಸ್ಥೆ’ಯ ಹಿಡಿತದ ಬಿಗಿಯನ್ನು ಕುರಿತು ಸ್ಪಷ್ಟಪಡಿಸುತ್ತದೆ.

ಇದು ಪರಂಪರೆ ಎನ್ನುವ ವಿಸ್ತøತ ಅರ್ಥದಲ್ಲಿ ನಿರಂತರತೆಯನ್ನು ಕಾಯ್ದುಕೊಂಡಿತು ಎನ್ನುವಲ್ಲಿಯೂ ‘ಜಾತಿ’ ಪರಿಕಲ್ಪನೆ ಯೋಚಿಸಲಾಗದಷ್ಟು ವ್ಯಾಪಕವಾಗಿತ್ತು ಎನ್ನುವುದು ವಿಚಿತ್ರ ಸತ್ಯ. ಇದು ಕವಿಯಿಂದ ಆರಂಭವಾಗಿ ವಸ್ತುವಿನವರೆವಿಗೂ ಆವರಿಸಿಕೊಂಡದ್ದಾಗಿತ್ತು. ನಾಗರೀಕ ಉತ್ಕರ್ಷದ ಕಾಲದ ಈ ಹೊತ್ತಿಗೂ ನಮ್ಮ ಸಾಂಸ್ಕøತಿಕ ವಲಯ ಇದರಿಂದ ಪಾರಾಗಿಲ್ಲವೆನ್ನುವ ಅರಿವೇ ಈ ಹೊತ್ತಿನ ‘ತಲ್ಲಣ’ವೂ ಹೌದು. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅಲ್ಲಲ್ಲಿ ಗಂಭೀರವಾದ ಬದಲಾವಣೆಯ ಆಶಯಗಳು, ಪ್ರಯತ್ನಗಳು ವ್ಯೆಯಕ್ತಿಕ ಮತ್ತು ಸಾಂಘಿಕ ನೆಲೆಯಲ್ಲಿಯೂ ನಡೆದಿವೆ ಎನ್ನುವುದು ಒಂದು ಆರೋಗ್ಯಕರವಾದ ಸೃಜನಶೀಲ ಪ್ರಕ್ರಿಯೆಯ ಸಾಧ್ಯತೆಯೂ ಹೌದು. ‘ವಚನ ಸಾಹಿತ್ಯ’ದಂತಹ ಅಪರೂಪದ ಪ್ರಯತ್ನವನ್ನಿಲ್ಲಿ ಉದಾಹರಣೆಯಾಗಿ ನೆನೆಯಬಹುದು.

“ಕಾಡಿನ ಕವಿಯು ನಾ

ನಾಡಿನ ಜನರೊಲಿದಾಲಿಪುದು”

ಎನ್ನುತ್ತಲೇ ಕನ್ನಡ ಸಾಹಿತ್ಯ ಲೋಕದಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ನೋಡ ನೋಡುತ್ತಲೇ ತ್ರಿವಿಕ್ರಮನಂತೆ ಬೆಳೆದವರು ಕುವೆಂಪು. ಸಾಹಿತ್ಯ-ಸಮಾಜ-ಸಂಸ್ಕøತಿಗಳಿಗೊಂದು ಅರಿವು-ಎಚ್ಚರಗಳ ಸಂಕೇತವೇ ಆಗಿಹೋದ ಮಲೆನಾಡಿನ, ಕುಪ್ಪಳ್ಳಿಯ ಪುಟ್ಟಪ್ಪ ವಿಶ್ವಮಾನವತೆಯ ಹರಿಕಾರರಾದದ್ದು ಒಂದು ಸಾಂಸ್ಕøತಿಕ ದಿಗ್ವಜಯ. ಸಾಹಿತ್ಯವೆಂದರೆ ಕಲ್ಪನೆಯ ಕನಸುಗಳ ಕನವರಿಕೆ ಮಾತ್ರವೇ ಅಲ್ಲ, ಅದು ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎನ್ನುತ್ತಲೇ “ಶ್ರೀ ಸಾಮಾನ್ಯನೂ ಭಗವದ್ ಮಾನ್ಯನಾಗುತ್ತಾ” “ಅನಂತ ತಾನ್ ಅನಂತವಾಗುವ” ಪ್ರಕ್ರಿಯೆಯಾಗಬೇಕು ಎಂದೇ ನಂಬಿದವರು, ಸಾಧಿಸಹೊರಟು ಅನಿಕೇತನದ ಅರ್ಥಕ್ಕೆ ಮುನ್ನುಡಿಯಾದವರು. “ಋಷಿಯಲ್ಲದವನು ಕಾವ್ಯ ಬರೆಯಲಾರ” ಎಂಬ ನಂಬಿಕೆಗಿದ್ದ ವರ್ಣಾಶ್ರಮದ ಚೌಕಟ್ಟಿನ ತಂತ್ರಗಳನ್ನು ಭೇದಿಸಿ ಸಮಾಜಮುಖಿಯಾಗುವ ಚಲನಶೀಲ ಪ್ರಜ್ಞೆಗಳಿಗೆ ದೀಪವಾದವರು.

ಪ್ರಾಚೀನ ನಂಬಿಕೆಯ ವ್ಯಷ್ಟಿ ಬದುಕಿನ ಚಿತ್ರಗಳೇ ಕಾವ್ಯಗಳೆಂಬ ಪರಂಪರೆಯ ಭ್ರಮೆಗಳನ್ನು ಹನ್ನೆರಡನೇ ಶತಮಾನದ ವಚನಕಾರರು ಒಡೆದುಹಾಕಿ ಸಾಮುದಾಯಿಕ ಭಾವಗಳಿಗೆ, ಪ್ರಜ್ಞೆಗಳಿಗೆ ಮಹತ್ವನೀಡಿ ಅರ್ಥಕಲ್ಪಿಸಿದ್ದು ಕನ್ನಡ ಸಾಹಿತ್ಯ-ಸಂಸ್ಕøತಿ ಸಂದರ್ಭದ ದಾಖಲೆಯೆನ್ನಬಹುದು. ನಂತರ ಅದು ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಮತ್ತೆ ಪ್ರಜ್ವಲಿಸಿದ್ದು ‘ಕುವೆಂಪು’ ಎಂಬ ಮಲೆನಾಡಿನ ನಿಸರ್ಗ ಕವಿಯ ಸಾಹಿತ್ಯದೊಂದಿಗೆ ಎನ್ನುವುದು ಯಾರೂ ನಿರಾಕರಿಸಬಹುದಾದ ಸಂಗತಿಯಲ್ಲ. ಬರಹ ಮತ್ತು ಬದುಕನ್ನು ಜೊತೆಗಿಟ್ಟು ತಾಳೆ ನೋಡುವಂತೆಯೇ ಸಾಹಿತ್ಯ ಸೃಜಿಸಿದ ಕುವೆಂಪು ಎಲ್ಲಾ ಪ್ರಕಾರಗಳಲ್ಲಿಯೂ ಸೈ ಎನಿಸಿಕೊಂಡು ಈ ನೆಲದ ಶ್ರಮಿಕ ತಳ ಸಮುದಾಯಗಳ ಜೀವನ ಪ್ರೀತಿಯ ಅನುಭವಗಳಿಗೆ ರೂಪಕೊಟ್ಟು, ಬದುಕೆಂದರೆ ಹೀಗೆ ಎಂದು ಸಹಜ ವ್ಯಾಖ್ಯಾನ ಬರೆದವರು. ಭಾರತದೇಶ ಎನ್ನುವುದಕ್ಕೆ ಇರುವ ಬಹುಜನರ ಆಯಾಮದ ನಿಜದ ನೆಲೆಯ ಮಡಿವಂತ ನಂಬಿಕೆಗಳನ್ನು ಸೀಳುತ್ತಲೇ ‘ಮಾನವ’ನಾಗಬೇಕಾದ ತುರ್ತನ್ನು ಪ್ರತಿಪಾದಿಸ ಹೊರಟದ್ದು. ಹಾಗಾಗಿಯೇ ಕುವೆಂಪು ಅವರಿಗೆ ಕಾವ್ಯ ಕೇವಲ ಕಾಲ್ಪನಿಕ ರಮ್ಯ ಸುಖ ಕೊಡುವ ಭಾವುಕ ಶಬ್ದಗಳಷ್ಟೇ ಆಗಲಿಲ್ಲ. ಅದರಾಚೆಗೆ ಬದುಕು ಮತ್ತು ಸಮಾಜಗಳ ನಿನ್ನೆ-ಇಂದು-ನಾಳೆಗಳನ್ನು ನಿಕಷಕ್ಕಿಡುವ ಜಾಗೃತಿಯ ಮಾಧ್ಯಮವೇ ಆಗಬೇಕು ಎಂಬ ತುಡಿತಗಳೇ ಸಾಹಿತ್ಯದ ರೂಪತಳೆಯುವುದಾಯ್ತು.

ಆಧ್ಯಾತ್ಮ ಮತ್ತು ವಿಜ್ಞಾನಗಳ ಎರಡು ವಿಭಿನ್ನ ನೆಲೆಗಳನ್ನು ಅನುಸಂಧಾನಗೊಳಿಸುತ್ತಲೇ ಸತ್ಯಕ್ಕೆ ಮುಖಾ-ಮುಖಿಯಾಗುವ ಬಗೆಯನ್ನು ಕುವೆಂಪು ಅವರ ನಿರಂತರ ಚಿಂತನೆ ಸಾಧಿಸಿತು. ಆದ್ದರಿಂದಲೇ ಈ ನೆಲದ ಆದಿಮ ಕಾವ್ಯವಾದ ರಾಮಾಯಣ ಕಥನ ‘ಶ್ರೀ ರಾಮಾಯಣ ದರ್ಶನಂ’ ಆದಾಗ ‘ಪಾಪಿಗುದ್ಧಾರಮಿಹುದು’ ಎಂಬ ಪ್ರಜ್ಞೆಯ ಅರಿವಿಗೆ ಅರ್ಥಬಂದಿತು. ಮಂಥರೆ ‘ಮಮತೆಯ ಸುಳಿ’ಯಾಗುತ್ತಾಳೆ, ರಾವಣ ‘ಮಹಾಚ್ಛಿಲ್ಪಿ’ಯಾಗುತ್ತಾನೆ. ಪ್ರತೀ ಬದುಕು-ಭಾವಗಳಿಗೂ ಅದರದ್ದೇ ಆದ ಅಸ್ತಿತ್ವಗಳಿರಬೇಕು ಎನ್ನುವ ಕಥನ ವಿೂರಿದ ಭಾವ ಮುಖಾ-ಮುಖಿಯಾಗಬೇಕಾದ ‘ದರ್ಶನ’ವನ್ನು ಕುವೆಂಪು ವಿಶಿಷ್ಟ ನೆಲೆಯಲ್ಲಿ ಅರಿವು ಮಾಡಿಸಲು ಯತ್ನಿಸುತ್ತಾರೆ.

ಕಾವ್ಯ, ಕತೆ, ಕಾದಂಬರಿ, ನಾಟಕ, ಮಹಾಕಾವ್ಯ, ಪ್ರಬಂಧ, ವಿಮರ್ಶೆ, ಜೀವನಚರಿತ್ರೆ, ಆತ್ಮಚರಿತ್ರೆ, ಭಾಷಾಂತರ -ಹೀಗೆ ಸಾಧ್ಯವಿರುವ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಕುವೆಂಪು ಅವರ ಬದ್ಧತೆ ಗಂಭೀರವಾಗಿಯೇ ಪ್ರಕಟಗೊಂಡಿದೆ. ಹಾಗಾಗಿಯೇ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಗಳು ನಂಬಿಕೆಗಳಾಗಿ ಮನುಜಮತ-ವಿಶ್ವಪಥವಾಗಬೇಕಾದ ಅಗತ್ಯತೆಯಾಗಿ ಪ್ರತಿಪಾದಿಸಲ್ಪಡುತ್ತವೆ. ಸಂಸ್ಕøತಿ ಎನ್ನುವುದೊಂದು ಸಮುದಾಯದ ಜೀವನಕ್ರಮ. ಅದು ಅವರವರ ಬದುಕಿನ ಸಹಜ-ಸರಳತೆಯ ನಂಬಿಕೆಯೂ ಆಗಿರುವುದುಂಟು. ಭಾರತದೇಶಕ್ಕೆ ಹೀಗೆ ಹತ್ತು-ಹಲವು ಸಾಂಸ್ಕøತಿಕ ಆಯಾಮಗಳಿವೆ. ಮೊದಲಲ್ಲಿ ಸಂಸ್ಕøತಿ ಸಂಘರ್ಷಗಳಾಗಿ ನಂತರಕ್ಕೆ ಬದುಕೇ ದೊಡ್ಡದಾದ ಕಾರಣಕ್ಕೆ ‘ಸಮನ್ವಯ’ವು ಸಾಧಿತವಾದದ್ದಿದೆ. ಹಾಗಾಗಿ ಭಾರತೀಯತೆ ಪ್ರಧಾನವಾಗಬೇಕು ಎನ್ನುವುದೇ ಎಲ್ಲಾ ಜ್ಞಾನಗಳ ಮೂಲವಾಗಬೇಕು. ಆದರೆ ಮನುಷ್ಯ ಸಂಬಂಧವೇ ದೊಡ್ಡದೆಂಬ ಸತ್ಯವನ್ನು ಮರೆಮಾಚಿ ಸಣ್ಣತನ, ಸ್ವಾರ್ಥ, ಅಧಿಕಾರ ಹೀಗೆ ವಿಚಿತ್ರ ಚಪಲಗಳ, ಲಾಲಸೆಗಳನ್ನೆ ಬೆನ್ನುಹತ್ತಿ ಆಧುನಿಕ ಭಾರತವನ್ನು ದಿಕ್ಕುತಪ್ಪಿಸುವ ‘ವ್ಯವಸ್ಥಿತ’ ಪಿತೂರಿಗಳ ನಡುವೆ “ವರ್ಣಾಶ್ರಮವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು” ಎಂಬ ಗಟ್ಟಿಯಾದ ಸ್ಪಷ್ಟ ಮಾತಿನೊಂದಿಗೆ ಕುವೆಂಪು ನಮಗೆ ಪ್ರಸ್ತುತರಾಗುತ್ತಾರೆ.

“ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು” ಎನ್ನುವ ಅರಿವಿನೊಂದಿಗೆ ಕುವೆಂಪು ಈ ಜಗದ ಮಹಾದಾರ್ಶನಿಕರೊಂದಿಗೆ ನಿಲ್ಲುತ್ತಾರೆನ್ನಬಹುದು. ತನ್ಮೂಲಕ ಸಾಹಿತ್ಯವೆನ್ನುವುದು ಕೇವಲ ಕಲ್ಪನೆಯ, ಕನಸಿನ ದಂತಗೋಪುರದಂತಾಗಬೇಕಿಲ್ಲ, ಅದು ಸಮಾಜವನ್ನು ಪರಿಷ್ಕರಿಸುವ, ಜ್ಞಾನವನ್ನು ಋಜುಮಾರ್ಗದಲ್ಲಿ ಅರ್ಥೈಸುವ, ನಂಬಿಕೆಗಳ ಸಾಧ್ಯಾಸಾಧ್ಯತೆಗಳನ್ನು ಪ್ರಶ್ನಿಸುವ, ಬದುಕಷ್ಟೇ ದೊಡ್ಡದು ಎನ್ನುವ ಸಾಂಸ್ಕøತಿಕ ಜವಾಬ್ದಾರಿಯ ಅರಿವು ಮೂಡಿಸುವ ಮಹಾಮಾರ್ಗವಾಗಬೇಕು ಎನ್ನುವುದನ್ನು ಕುವೆಂಪು ಸ್ಪಷ್ಟೀಕರಿಸುತ್ತಾರೆ. ಕವಿ ದಾರ್ಶನಿಕ ನೆಲೆಯಲ್ಲಿ ಸಾರ್ವಕಾಲಿಕವಾಗುವುದು ಇಂತಹದ್ದೇ ಕಾರಣಗಳಿಂದ ಎನ್ನಬಹುದು.

ಆಧುನಿಕ ಕನ್ನಡ ಸಾಹಿತ್ಯ ಪರಂಪರೆಗೆ ಸುಮಾರು ನೂರು ವರ್ಷಗಳ ಇತಿಹಾಸವಿದೆ. ಸಮಾಜ, ದೇಶ, ಕಾಲದ ಕಾರಣದಿಂದಲೂ ‘ಆಧುನಿಕತೆ’ ಎನ್ನುವುದನ್ನು ಅನ್ವರ್ಥವಾಗಿ ಬಳಸುವುದು, ಗ್ರಹಿಸುವುದು ಅರ್ಥಪೂರ್ಣವೆನ್ನುವ ಹಿನ್ನೆಲೆಯಲ್ಲಿಯೇ ಸಾಹಿತ್ಯವೂ ‘ಆಧುನಿಕ’ದ ಹೆಸರಿನೊಂದಿಗಿತ್ತು. ‘ಹೊಸ ಬಗೆಯ ಆಲೋಚನೆ’ ಎನ್ನುವ ಒಪ್ಪಂದವಿಲ್ಲಿ ಇದ್ದರೂ ಇದು ಸಂಪೂರ್ಣ ಹೊಸತಲ್ಲ, ಹಳತನ್ನು ಅನುಸಂಧಾನ ಮಾಡುತ್ತಲೇ ಹೊಸತಾಗಬಹುದಾದ ತುರ್ತಿಗೆ ಸಂಬಂಧಿಸಿದ್ದಾಗಿತ್ತು. ‘ಮನುಷ್ಯ’ ಕೇಂದ್ರ ಪ್ರಜ್ಞೆಗೆ ಬಂದ ಆಲೋಚನೆಯ ‘ವಿಶಿಷ್ಟ’ ನೆಲೆಗಳಿಗೆ ಬೆಲೆ ಬಂದಿತ್ತು. ಆ ಕಾರಣಕ್ಕೆ ಸಮಾಜಮುಖಿಯಾಗಬೇಕಾದ ತುರ್ತು ಸಹ ಸಾಹಿತ್ಯಕ್ಕಿತ್ತು.

‘ಸಮಾಜಮುಖಿ’ ಮತ್ತು ‘ತುರ್ತು’ಗಳೆಂಬ ಎರಡು ಸಂಗತಿಗಳು ಇಲ್ಲಿ ಮುಖ್ಯ. ಸಮಾಜಮುಖಿಯಾಗುವ ಅರ್ಥ ಜೊತೆಗೆ ‘ತುರ್ತು’ ಎನ್ನುವುದು ಸಹ ನೀಡಬೇಕಾದ ಪ್ರಾಧಾನ್ಯತೆಯ ಅಂಶವನ್ನು ಸ್ಪಷ್ಟೀಕರಿಸುವುದಾಗಿತ್ತು. ಹಾಗೆ ನೋಡುವಾಗ ವಿಶಿಷ್ಟವಾಗಿ ಕಾಣಿಸುವುದು ಕುವೆಂಪು ಎಂಬ ಮಲೆನಾಡು ಕವಿಯ ಪ್ರವೇಶ. ಈ ಕವಿ, ತನ್ನ ಕಾವ್ಯ ಸಂದರ್ಭದ ಹೊತ್ತಿಗೆ ತಮಗಷ್ಟೆ ಸಾಹಿತ್ಯ ವಿೂಸಲು ಎಂಬಂತಿದ್ದ ವರ್ಗ ಚೌಕಟ್ಟನ್ನು ಭೇದಿಸಿದಂತೆ ಒಬ್ಬನೇ ಕವಿ ‘ಸಮಷ್ಟಿ’ ಶಕ್ತಿಯೂ ಆಗಬಹುದು ಎನ್ನುವ ಸಾಧ್ಯತೆಯನ್ನು ತನ್ನ ಸಾಹಿತ್ಯ ಸೃಷ್ಟಿಯ ಮುಖೇನವೆ ಸಾಧಿಸಿತೋರಿಸಿದ್ದು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ, ವರ್ತಮಾನದ ಮಹತ್ವದ ಸಂಗತಿ.

ನಿಜದ ನೆಲೆಯ, ಬದ್ಧತೆಯ ಮೊದಲ ಪ್ರಗತಿಪರವಾದ, ಶೋಷಣೆಯ ವಿರುದ್ಧವಾದ ಧ್ವನಿ ಕುವೆಂಪುವಿನದು ಎನ್ನುವುದಿಲ್ಲಿ ಮುಖ್ಯ. ‘ಶ್ರೀ ಸಾಮಾನ್ಯನೇ ಭಗವದ್ ಮಾನ್ಯಂ’ ಆಗುತ್ತಾನೆ. ಇದು ಕುವೆಂಪು ಸಾಹಿತ್ಯದ ಹುಟ್ಟು-ವಿಕಾಸವೂ ಹೌದು. ಅದು ‘ಜಲಗಾರ’ನಿಂದ ಆರಂಭವಾಗಿ ‘ಶೂದ್ರತಪಸ್ವಿ’ಯನ್ನು ಒಳಗೊಂಡು ಗುತ್ತಿ-ತಿಮ್ಮಿ, ಐತ-ಪೀಂಚಲು ಅವರನ್ನೆ ಲ್ಲಾ ಕೇಂದ್ರೀಕರಿಸಿಕೊಂಡು ರಾವಣನನ್ನೇ ಮಹಾಶಿಲ್ಪಿಯಾಗಿಸುವವರೆಗೂ ಚಾಚಿಕೊಂಡಿದೆ.

ಮಾನವತೆಯ, ಸಾಮಾಜಿಕ ಕಳಕಳಿಯ ಬದ್ಧತೆಯನ್ನು ತಮ್ಮ ವ್ಯಕ್ತಿತ್ವದ ಮಹತ್ವದ ಲಕ್ಷಣವಾಗಿಯೇ ಕಾಯ್ದುಕೊಂಡ ಕಾರಣಕ್ಕೂ ಕುವೆಂಪು ಸಾಹಿತ್ಯಕ್ಕೆ ಒಂದು ಪರಂಪರೆಯ ಅರ್ಥವೂ ಲಭ್ಯವಾಗಿದೆ. ಅದು ಗೊಬ್ಬರದ ವಸ್ತುವಾಗಿ, ನೇಗಿಲಯೋಗಿಯನ್ನು ಕಂಡು ಶ್ರೀಸಾಮಾನ್ಯನಲ್ಲಿ ವಿರಮಿಸುವಂತಾಗುತ್ತದೆ. “ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ” ಎನ್ನುವುದು ಸಾಹಿತ್ಯದ ವಿರಾಟ್ ಸ್ವರೂಪವಾದರೆ, “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಧ್ಯೇಯವಾಕ್ಯವಾಗುತ್ತದೆ. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯಿಂದ ಮನುಜಮತ-ವಿಶ್ವಪಥದ ದರ್ಶನಕ್ಕೆ ದುಡಿದು ‘ಅನಿಕೇತನ’ದ ಕನಸು ಕಾಣುವುದು ಸಾಧ್ಯವಾಗುತ್ತದೆ.

“ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು” ಇದು ಕುವೆಂಪು ಪ್ರತಿಪಾದಿಸುವ ಮೂಲಸತ್ಯ. ಇದು ಎಲ್ಲ ಅಕ್ಷರಸ್ಥ, ಅನಕ್ಷರಸ್ಥರ ಎದೆಯೊಳಗೂ ಇದ್ದಿರಲೇಬಹುದಾದ ಧ್ವನಿ, ಅದರ ಸಾಕಾರಕ್ಕೆ ಬಂದಾಗ ಎಷ್ಟು ಬದ್ಧರಾಗಿದ್ದೇವೆ. ‘ವಿಶ್ವಮಾನವ’ ಮಗುವನ್ನು ‘ಅಲ್ಪಮಾನವ’ರನ್ನಾಗಿಸುವಲ್ಲಿಯೇ ನಮ್ಮ ಕೆಟ್ಟ ಹಠವಿದ್ದಂತಿದೆ.

“ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಿದೆ. ಅಂದರೆ ನಮಗೆ ಇನ್ನು ಬೇಕಾದುದು ಆ ಮತ, ಈ ಮತ ಅಲ್ಲ; ಮನುಜಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು, ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ” (ಕುವೆಂಪು ಸಮಗ್ರ ಕಾವ್ಯ ಸಂಪುಟ-2, ಪುಟಸಂಖ್ಯೆ-892). -ಇದು ಕುವೆಂಪು ಅವರು ಬದುಕನ್ನು ಸರಳ, ಸಹಜ, ಸುಂದರವಾಗಿಸಿಕೊಂಡು ಸಾರ್ಥಕವಾಗಿ ಬದುಕಬಹುದಾದ ಸಾಧ್ಯತೆಗೆ ನೀಡಿದ ಪಂಚಮಂತ್ರಗಳು. ಭಾವುಕವೆಂದುಕೊಳ್ಳಬೇಕಿಲ್ಲ. ಎಲ್ಲರೂ ಹೀಗೆ ಎಂದು ನಡೆದುಕೊಂಡರೂ ಯಾರೂ ಯಾರನ್ನೂ ಸರಿಮಾಡಬೇಕಿಲ್ಲ. ಎಲ್ಲರೂ ವಿಶ್ವಪ್ರಜ್ಞೆಗಳೇ ಆಗಿಬಿಡಬಹುದು ಅದರರ್ಥ ಪ್ರತಿಯೊಬ್ಬರೂ ವಿಶ್ವಮಾನವರೇ…..

ವಿದ್ಯೆ, ಜ್ಞಾನ, ಅರಿವುಗಳೆಲ್ಲವೂ ಯಾವುದೇ ವರ್ಗದ, ಜಾತಿಯ ಆಸ್ತಿಗಳೇ ಆಗಿಬಿಡಬಹುದಾಗಿದ್ದ ಅಪಾಯಗಳಲ್ಲಿ ಅಲ್ಲೊಮ್ಮೆ, ಇಲ್ಲೊಮ್ಮೆ ವಿೂರುವ ಮಿಂಚುಗಳು ಕಾಣಿಸಿದ್ದುಂಟು ಆದರೆ ಆಧುನಿಕತೆಯ ಕಾಲಕ್ಕೆ ಕುವೆಂಪು ಎಲ್ಲಾ ಶ್ರಮಪರ, ತಳಸಮುದಾಯಗಳಿಗೆ ಬೆಳಕಾದದ್ದು ದಾಖಲೆ. ಈ ಹೊತ್ತಿನ ಬಹಳಷ್ಟು ದ್ವಂದ್ವ, ಅರಾಜಕತೆ, ಸಾಂಸ್ಕøತಿಕ ತಲ್ಲಣ, ಭಾಷೆ, ಸಮಾಜ, ಸರ್ಕಾರ ಎಲ್ಲವುಗಳ ಬಗೆಗೂ ಕುವೆಂಪು ಅವರ ಚಿಂತನೆಗಳಲ್ಲಿ ಉತ್ತರವಿದೆ. ಅದು ಮಕ್ಕಳು, ಯುವಕರು, ವಯಸ್ಕರು ಹೀಗೆ ಎಲ್ಲರನ್ನೂ ಆವರಿಸಿಕೊಂಡು ಚಿಂತನೆಗೆ ಹಚ್ಚಬಹುದಾದುದು. ಆಧುನಿಕತೆಯ ಉತ್ಕರ್ಷದಾ ಹೊತ್ತಿಗೂ ಮತ್ತೆ ಧರ್ಮದ ಹೆಸರಿನಲ್ಲಿ ಮೌಢ್ಯಗಳನ್ನು ಬಿತ್ತುತ್ತಲೇ ಆಚರಣೆಗಳ ನೆಪದಲ್ಲಿ ಶೋಷಣೆ ನಡೆಯುತ್ತಿದೆ. ಇಂತಲ್ಲಿ “ಗುಡಿ ಚರ್ಚು ಮಸಜೀದುಗಳ ಬಿಟ್ಟು ಹೊರಬನ್ನಿ” ಎಂಬ ಕವಿಯ ಕರೆ ಅರ್ಥವಾಗಬೇಕಿದೆ. “ಸರ್ವರಿಗೆ ಸಮಬಾಳು/ಸರ್ವರಿಗೆ ಸಮಪಾಲು” ಎನ್ನುವುದು ಎಚ್ಚರವಾಗಬೇಕಿದೆ. ಅತಂತ್ರ ಪ್ರಜ್ಞೆಯಿಂದ ಆಧುನಿಕ ಜಾಲದಲ್ಲಿ ನಾಗರಿಕತೆಯ ಹೆಸರಿನಿಂದ ಮೆಲ್ಲಗೆ ಜಾರುತ್ತಿರುವ ನಮ್ಮ ಈ ವರ್ತಮಾನಕ್ಕೆ ಕುವೆಂಪು ಮತ್ತೆ ಮತ್ತೆ ಕಾಡುತ್ತಾರೆ. ಅಲ್ಪಮಾನವತನದಿಂದ ವಿಶ್ವಮಾನವತೆಯೆಡೆಗೆ ಸಾಗುವ ಭಾವಶುದ್ಧದ ಕನಸಿನ ಯಾವುದೇ ಪ್ರಜ್ಞಾವಂತ ಮನಸ್ಸಿಗೂ ಕುವೆಂಪು ಚಿಂತನೆ ಅಗತ್ಯ….. ಅತ್ಯಗತ್ಯ….

ಯುವಕರನ್ನು ಕುರಿತು ಕುವೆಂಪು ನೀಡುವ ಕರೆ “ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ” ಒಂದು ಅನನ್ಯತೆಯ ರೂಪಕ. ಈ ಹೊತ್ತಿಗೂ ಸಲ್ಲಬಲ್ಲ ಭಾರತದಂತಹ ಮೌಢ್ಯ, ಸನಾತನತೆಯನ್ನು ಭವ್ಯವೆಂದು ವಾದಿಸಬಲ್ಲ ಮನಸ್ಥಿತಿಯ ವ್ಯವಸ್ಥೆ ಇರುವವರೆವಿಗೂ ಪ್ರಖರ ವಿಚಾರ ಅಸ್ತ್ರವಾಗಬಲ್ಲ ಸಂಗತಿಗಳನ್ನು ಕವಿ ಇಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗೆಯೇ ತಮ್ಮ ಆಲೋಚನೆಗಳ ಬಗೆಗೆ ಅವರು ಖಚಿತವಾಗಿದ್ದಾರೆ. ಹಾಗಾಗಿಯೇ ಪ್ರಸ್ತಾಪಿಸಿಯೇ ಸಿದ್ಧ ಎನ್ನುವುದವರ ನಿಲುವು. “ನನ್ನ ಅಭಿಪ್ರಾಯಗಳು ಕೆಲವರಿಗೆ ರುಚಿಸದಿರಬಹುದು, ಮತ್ತೆ ಕೆಲವರಿಗೆ ಕ್ರಾಂತಿಕಾರಿಗಳಾಗಿ ತೋರಬಹುದು. ಆದರೂ ನನ್ನ ಮನಸ್ಸಿನಲ್ಲಿ ಯಾರನ್ನಾದರೂ ನೋಯಿಸಬೇಕೆಂಬ ಇಚ್ಛೆ ಲವಲೇಶವೂ ಇಲ್ಲ. ಅಲ್ಲದೆ ನಾನು ಹೇಳಲಿರುವ ಅಭಿಪ್ರಾಯಗಳು ಅಲ್ಪಾಲೋಚನೆಯಿಂದಾಗಲಿ, ಉದ್ರೇಕದ ಬುದ್ಧಿಯಿಂದಾಗಲಿ, ಅನುದಾರತೆಯಿಂದಾಗಲಿ, ಪ್ರತಿಹಿಂಸಾಭಾವದಿಂದಾಗಲಿ ಬಂದುವಲ್ಲ; ಬಹುಕಾಲದ ದೀರ್ಘ ಮಂಥನದಿಂದ, ಪ್ರಶಾಂತ ಧ್ಯಾನದಿಂದ, ಅನ್ಯಾಯಗಳನ್ನೂ ಅವಿವೇಕವನ್ನೂ ಅಜ್ಞಾನಜನ್ಯವಾದ ಕ್ರೂರವರ್ತನೆಗಳನ್ನೂ ಕಂಡಾಗ ಮೂಡಿದ ಸಾತ್ವಿಕ ಕ್ರೋಧದಿಂದ, ನಮ್ಮ ದೇಶ, ನಮ್ಮ ನಾಡು, ನಮ್ಮ ಭಾಷೆ, ನಮ್ಮ ಸಂಸ್ಕøತಿ, ನಮ್ಮ ಸ್ಥಿತಿಗತಿಗಳು ಉಚ್ಛ್ರಾಯವಾಗಬೇಕೆಂಬ ಹಂಬಲದಿಂದ ಮೂಡಿದುವಾಗಿವೆ”. (ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಕುವೆಂಪು ಸಮಗ್ರ ಗದ್ಯ, ಸಂಪುಟ-2, ಪುಟಸಂಖ್ಯೆ-64).

ಈ ಬಗೆಯ ಅಭಿಪ್ರಾಯ ಬಹುಪಾಲು ಎಲ್ಲ ವಿಚಾರವಂತ, ದಾರ್ಶನಿಕರ ಪ್ರತಿಧ್ವನಿಯೇ ಆಗಿರುತ್ತದೆ. ಸ್ವಾರ್ಥರಹಿತವಾದ, ಜೀವನ ಪ್ರೀತಿಯ, ಪ್ರಕೃತಿ ಸಹಜ ಪ್ರಜ್ಞೆಯ ಚಿಂತನೆಗಳಿಗೆಲ್ಲಾ ಇಂತದ್ದೇ ಆತ್ಮವಿಶ್ವಾಸವಿರುವುದು ಸಹಜ, ಹಾಗಾಗಿಯೇ ಅಂತಹ ಮಾತುಗಳಿಗೆ ಸಾರ್ವಕಾಲಿಕ ಮಹತ್ವ ತನ್ನಿಂತಾನೇ ಲಭ್ಯವಾಗುತ್ತದೆ. ವ್ಯವಸ್ಥಿತ ಸಂಚುಗಳಿಗೆ ಮಾತ್ರ ಅವರ ನಂಬಿಕೆಗಳ ಮೇಲಿನ ಧಾಳಿಯಂತಾಗಿ ಆತಂಕವುಂಟಾಗುವುದು ಸಹಜವಾಗುತ್ತದೆ.

 

 

 

 

Related posts

ರಾಜ್ಯದಲ್ಲಿ ಅನಧಿಕೃತ ಪಡಿತರ ಚೀಟಿ ರದ್ಧತಿಗೆ ಕಠಿಣ ಕ್ರಮ- ಆಹಾರ ಸಚಿವ ಉಮೇಶ್ ಕತ್ತಿ..

Public Voice

ರಾಜ್ಯದ ಸಚಿವರು, ಸಂಸದರ ಹೊಸ ಕಾರು ಖರೀದಿಗೆ ನೀಡುತ್ತಿದ್ದ ಮೊತ್ತ ಹೆಚ್ಚಳ….

Public Voice

ಕುವೆಂಪು ವಿವಿಯಲ್ಲಿ ಸಹ್ಯಾದ್ರಿ ಸಿನಿಮೋತ್ಸವ

Public Voice