March 25, 2021
Public Voice
ಚಿಕ್ಕಮಗಳೂರು ಜಿಲ್ಲೆ ಮುಖ್ಯಾಂಶಗಳು

ಆತ್ಮೋದ್ಧಾರಕ್ಕೆ ಸೇವೆ ಸಹಕಾರಿ: ಪದ್ಮನಾಭಪೈ

ಚಿಕ್ಕಮಗಳೂರು :  ಆತ್ಮೋದ್ಧಾರಕ್ಕೆ ಸೇವೆ ಸಹಕಾರಿ ಎಂದು ಶ್ರೀಸತ್ಯಸಾಯಿ ಸೇವಾಸಂಸ್ಥೆಗಳ ಕರ್ನಾಟಕ ಉತ್ತರಘಟಕದ ಅಧ್ಯಕ್ಷ ಮಂಗಳೂರಿನ ಪದ್ಮನಾಭಪೈ ನುಡಿದರು.
ನಗರದ ಸಾಯಿಮಧುವನ ಬಡಾವಣೆಯ ಶ್ರೀಸತ್ಯಸಾಯಿ ಮಂದಿರದಲ್ಲಿ ಜಿಲ್ಲೆಯಲ್ಲಿ ಮುಂದಿನ ಐದುವರ್ಷಗಳ ಶತಮಾನೋತ್ಸವ ಕ್ರಿಯಾಯೋಜನೆ ಸಿದ್ಧಪಡಿಸುವ ಹಿನ್ನಲೆಯಲ್ಲಿ ಜಿಲ್ಲೆಯ 5ಸಾಯಿಸಮಿತಿ ಹಾಗೂ 7ಭಜನಾಮಂಡಳಿಗಳ ಪದಾಧಿಕಾರಿಗಳ ಒಂದುದಿನದ ಕಾರ್ಯಾಗಾರ ಉದ್ಘಾಟಿಸಿ ನಿನ್ನೆ ಬೆಳಗ್ಗೆ ಅವರು ಮಾತನಾಡಿದರು.
ಸೇವೆ ಮಾಡುವುದು ಮತ್ತೊಬ್ಬರಿಗೆ ಉಪಕಾರಿ ಆಗಬೇಕೆಂದಲ್ಲ, ನಮ್ಮನ್ನು ನಾವು ಪರಿವರ್ತಿಸಿಕೊಳ್ಳಲು ಸೇವೆಯಲ್ಲಿ ತೊಡಗಬೇಕು.  ಯಾವುದೇ ಅಪೇಕ್ಷೆಗಳಿಲ್ಲದ ನಿಸ್ವಾರ್ಥವಾದ ಸೇವೆ ಭಗವಾನ್ ಬಾಬಾ ಅವರಿಗೆ ಪ್ರಿಯವಾದದ್ದು, ಮಾನವತ್ವದಿಂದ ಮಾಧವತ್ವದ ಕಡೆಗೆ ಒಯ್ಯಲು ಸತ್ಯಸಾಯಿ ಸೇವಾಸಂಸ್ಥೆಗಳು ಹೆದ್ದಾರಿ ಎಂದರು.
ಜೀವನದ ಸಾಕ್ಷಾತ್ಕಾರಕ್ಕೆ ಸೇವಾಪಥ ಒಳ್ಳೆಯ ಆಯ್ಕೆ.  ದೇವರಿಂದ  ದೂರ ಸರಿಯುವುದನ್ನು ತಪ್ಪಿಸಲು ಸೇವಾಮಾರ್ಗ ಬೋಧಿಸಲಾಗಿದೆ.  ನಾವೆಲ್ಲರೂ ಸೊನ್ನೆಗಳು ನಮ್ಮ ಪಕ್ಕ ದೇವರೆಂಬ ಒಂದುಸಂಖ್ಯೆ ಇದ್ದಾಗ ಮಾತ್ರ ನಮಗೆಲ್ಲ ನೆಲೆ ಬೆಲೆ.  ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ನೆನಪಿಡಬೇಕು.  ಸಂಪೂರ್ಣ ಶರಣಾಗತಿಯಿಂದ ಮಾತ್ರ ದೇವರ ಅನುಗ್ರಹಕ್ಕೆ ಪಾತ್ರವಾಗಬಹುದು ಎಂದರು.
ಶ್ರೀಸತ್ಯಸಾಯಿ ಸೇವಾ ಸಂಸ್ಥೆಗಳು ನಮ್ಮನ್ನು ಪರಿವರ್ತಿಸಿಕೊಳ್ಳಲು ಸೂಕ್ತವೇದಿಕೆ.  2025ರಲ್ಲಿ ಬಾಬಾ ಅವರ ಜನ್ಮ ಶತಮಾನೋತ್ಸವ ಮೈಲಿಗಲ್ಲಾಗಿ ಆಚರಿಸಬೇಕೆಂಬ ಹಿನ್ನಲೆಯಲ್ಲಿ ಕೇಂದ್ರ ಸಮಿತಿ ಮುಂದಿನ ಐದುವರ್ಷಗಳ ಕ್ರಿಯಾಯೋಜನೆಯನ್ನು ರೂಪಿಸಿದೆ.  ವಿಶ್ವದ 155 ದೇಶಗಳಲ್ಲಿ ಸಾಯಿಭಕ್ತರಿದ್ದಾರೆ.  ಪುಸ್ತಕಜ್ಞಾನಕ್ಕಿಂತ ನೈತಿಕ ಶಿಕ್ಷಣ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಶಿಕ್ಷಣನೀಡಿ ಆತ್ಮವಿಶ್ವಾಸ ಹೊಮ್ಮುವಂತೆ ಮಾಡುವುದೇ ಪ್ರಮುಖ ಕಾರ್ಯ.  18ಶಾಲೆಗಳು, ಜಾಗತಿಕಮಟ್ಟದ ಆಸ್ಪತ್ರೆಗಳು, ಕುಡಿಯುವ ನೀರಿನ ಯೋಜನೆ ಸೇರಿದಂತೆ ಈಗಾಗಲೇ ರೂಪಿತವಾದ ಯೋಜನೆಗಳನ್ನು ಬಲಿಷ್ಠವಾಗಿಸಿ ಮುಂದುವರೆಸುವುದು ಸವಾಲಿನ ಕೆಲಸವೆಂದು ವಿವರಿಸಿದರು.
ದೇಶದ 28ರಾಜ್ಯಗಳ 458ಜಿಲ್ಲೆಗಳಲ್ಲಿ 2,887 ಶ್ರೀಸತ್ಯಸಾಯಿಸೇವಾ ಸಮಿತಿಗಳಿವೆ. 3,742ಭಜನಾ ಮಂಡಳಿಗಳಿವೆ.  2.21ಲಕ್ಷ ಸೇವಾದಳದ ಸಕ್ರಿಯಾ ಸದಸ್ಯರಿದ್ದಾರೆ.  13,000 ಬಾಲವಿಕಾಸ ಕೇಂದ್ರಗಳಿದ್ದು 5ವರ್ಷದಲ್ಲಿ 36,000ಕೇಂದ್ರಗಳಿಗೆ ಹೆಚ್ಚಿಸುವ ಗುರಿ ಇದೆ.  2,000ಶಾಲೆಗಳಲ್ಲಿ 20,000ಗುರುಗಳು ಮಕ್ಕಳಿಗೆ ನೈತಿಕ ಶಿಕ್ಷಣ ಕಲಿಸುತ್ತಿದ್ದು, ಅದನ್ನು 4,000ಶಾಲೆಗಳಲ್ಲಿ 70,000ಗುರುಗಳಿಗೆ ವಿಸ್ತರಿಸುವ ಯೋಜನೆ ಇದೆ.  ಮೂರುಹಂತಗಳಲ್ಲಿ 9ರಿಂದ14ರ ವಯೋಮಾನಕ್ಕೆ ಬಾಲವಿಕಾಸ ಕೇಂದ್ರಗಳಲ್ಲಿ 3.3ಲಕ್ಷ ಮಕ್ಕಳಿಗೆ ಪ್ರಸ್ತುತ ನೈತಿಕ ಶಿಕ್ಷಣ ನೀಡಲಾಗುತ್ತಿದೆ.  20ಲಕ್ಷ ಮಕ್ಕಳಿಗೆ ವಿಸ್ತರಿಸುವ ಗುರಿ ಇದೆ ಎಂದ ಪದ್ಮನಾಭಪೈ, ಇಲ್ಲಿ ಮೌಲ್ಯಗಳನ್ನು ಕಲಿತು ಜೀವನದಲ್ಲಿ ಆಳವಡಿಸಿಕೊಳ್ಳುವುದರಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಉತ್ತಮ ಕೊಡುಗೆ ಆಗಲಿದೆ ಎಂದರು.
ರಾಜ್ಯ ಮಹಿಳಾ ಸೇವಾ ಸಂಯೋಜಕಿ ಪ್ರಿಯಾಪೈ ಮಾತನಾಡಿ ಶಿಸ್ತಿನ ಜೀವನ, ಮಾಡುವ ಕಾರ್ಯದಲ್ಲಿ ಪರಿಪೂರ್ಣತೆ, ನಿಸ್ವಾರ್ಥಸೇವೆಯಿಂದ ಬಾಬಾ ಅವರ ಅನುಗ್ರಹ ಸಾಧ್ಯ.  ಪ್ರೇಮದಿಂದ ಸೇವೆ ಮಾಡಬೇಕು.  ಆತ್ಮೀಯತೆ, ಸಮರ್ಪಣಾಭಾವ ಒಟ್ಟುಗೂಡಿದ ಸಾಮೂಹಿಕ ಸೇವೆಗೆ ಹೆಚ್ಚಿನ ಪ್ರಾಧ್ಯಾನತೆ ಇದೆ.  ನನ್ನ ಜೀವನವೇ ನನ್ನ ಸಂದೇಶ ಎಂದು ಬಾಬಾ ಅಂದು ಹೇಳಿದ್ದರು.  ಆದರೆ ಇಂದು “ಅನುಯಾಯಿಗಳ ಜೀವನವೇ ಅವರ ಸಂದೇಶ”ವೆಂದು ಹೇಳುತ್ತಾರೆಂದರು.
ಪ್ರಶಾಂತಿವನದ ಸೆಕ್ಯೂರಿಟಿ ಮುಖ್ಯಸ್ಥರಾದ ನಿರಂಜನಹೆಬ್ಬಾರ್ ಮಾತನಾಡಿ ಪ್ರಸ್ತುತ 3,000ಸ್ವಯಂಸೇವಕರು ಪುಟ್ಟಪರ್ತಿಯಲ್ಲಿ ಸಮವಸ್ತ್ರವಿಲ್ಲದೆ ಅಹಿತಕರ ಘಟನೆ ನಡೆಯದಂತೆ ರಕ್ಷಣಾಕಾರ್ಯದಲ್ಲಿ ತೊಡಗಿದ್ದಾರೆ.  5ವರ್ಷಗಳಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ವಿಪರೀತವಾಗುವ ಸಾಧ್ಯತೆಗಳಿರುವುದರಿಂದ 10,000ಸ್ವಯಂಸೇವಕರ ಅವಶ್ಯಕತೆ ಬೀಳಲಿದೆ.  ಆಸಕ್ತರಿಗೆ ವಿವೇಚನಾಶಕ್ತಿ ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸುವ  ಅವರಿಗೆ  ವಿಶೇಷ ತರಬೇತಿ ನೀಡಲಾಗುತ್ತದೆ ಎಂದರು.
ವಿವಿಧ ಗೋಷ್ಠಿಗಳಲ್ಲಿ ರಾಜ್ಯ ಸೇವಾಸಂಯೋಜಕ ಡಿ.ಪ್ರಭಾಕರ್ ಬೀರಯ್ಯ, ಪುರುಷ ಆಧ್ಯಾತ್ಮಿಕ ರಾಜ್ಯಸಂಯೋಜಕ ಗೌಡಣ್ಣಪಾಟೀಲ, ಮಹಿಳಾ ಆಧ್ಯಾತ್ಮಿಕ ರಾಜ್ಯಸಂಯೋಜಕಿ ಮಂಜುಳಾರಾವ್,  ಮಹಿಳಾ ಶೈಕ್ಷಣಿಕ ರಾಜ್ಯ ಸಂಯೋಜಕಿ ಸೌಮ್ಯರೂಪ, ಎಜುಕೇರ್ ರಾಜ್ಯ ಸಂಯೋಜಕ ಜಗನ್ನಾಥ್ ನಾಡಿಗೇರ್ ವಿಚಾರ ಮಂಡಿಸಿದರು.
ಚಿಕ್ಕಮಗಳೂರು ಜಿಲ್ಲಾ ಶ್ರೀಸತ್ಯಸಾಯಿ ಸೇವಾ ಸಮಿತಿಗಳ ಅಧ್ಯಕ್ಷ ಬಿ.ಪಿ.ಶಿವಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ನಿಗಟಪೂರ್ವ ಅಧ್ಯಕ್ಷ ಎಲ್.ಎಚ್.ಅಂಕೋಲೇಕರ್, ಸ್ಥಳೀಯ ಸೇವಾ ಕ್ಷೇತ್ರ ಟ್ರಸ್ಟ್‍ಅಧ್ಯಕ್ಷ ಬಿ.ವಿ.ಶ್ರೀನಿವಾಸಲು, ನಿ.ಪೂ.ಅಧ್ಯಕ್ಷ ಎಂ.ಆರ್.ನಾಗರಾಜ್ ವೇದಿಕೆಯಲ್ಲಿದ್ದರು.
ಸೇವಾಸಂಯೋಜಕ ಭೋಜೇಗೌಡ, ಪದಾಧಿಕಾರಿಗಳಾದ ರವಿ, ವಾಸು ಮತ್ತಿತರರ ನೇತೃತ್ವದಲ್ಲಿ ಬೆಳಗ್ಗೆ ಶ್ರೀಸತ್ಯಸಾಯಿಬಾಬಾ ಅವರ ಪಲ್ಲಕ್ಕಿಉತ್ಸವ ಮಧುವನ ಬಡಾವಣೆಯಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.  ಭಜನೆ, ಸಂಕೀರ್ತನೆ, ವೇದಮಂತ್ರಗಳ ಉದ್ಘೋಷ ಮೆರಗು ನೀಡಿತು.

Related posts

ಮತ್ತೆ ಸಿದ್ದರಾಮಯ್ಯರನ್ನ ವಿಪಕ್ಷ ಸ್ಥಾನದಲ್ಲಿ ಕೂರಿಸದಿದ್ರೆ ನಾನು ಯಡಿಯೂರಪ್ಪನೇ ಅಲ್ಲ….

Public Voice

ಪಡಿತರ ಮೂಲಕ ಮಂಡ್ಯ ಆಲೆಮನೆ ಬೆಲ್ಲ ವಿತರಿಸಿ-ಸಿಎಂಗೆ ಪತ್ರ

Public Voice

ಸತ್ವಯುತ ವ್ಯಕ್ತಿತ್ವ ನಿರ್ಮಾಣದ ಬೆಳಕಿಂಡಿ ಸ್ವಾಮಿ ವಿವೇಕಾನಂದ : ಡಿ.ಎಸ್.ಅರುಣ್

Public Voice