ವಿಜಯಪುರ: ಜನವರಿ 24 ರಂದು ನಡೆಯಬೇಕಿದ್ದ ಎಫ್ ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮುಂದೂಡಿಕೆಯಾಗಿ ಫೆಬ್ರವರಿ 28ರಂದು(ಇಂದು) ನಡೆದಿದೆ. ಆದರೆ ಈ ಬಾರಿಯೂ ಗೋಲ್ ಮಾಲ್ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೌದು ಎಫ್.ಡಿ.ಎ. ಪರೀಕ್ಷೆಯ ಸಾಮಾನ್ಯ ಜ್ಞಾನ ಪರೀಕ್ಷೆ ಬರೆಯುವ ವೇಳೆ ಪರೀಕ್ಷಾರ್ಥಿಯು ನಕಲು ಮಾಡುವಾಗ ಸಿಕ್ಕಿ ಬಿದ್ದಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು, ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
ಭಾನುವಾರ ಎಫ್.ಡಿ.ಎ. ಪರೀಕ್ಷೆಗಾಗಿ ನಗರ ಎಸ್.ಎಸ್. ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬೆಳಗಿನ ಅವಧಿಯಲ್ಲಿ ನಡೆದ ಸಾಮಾನ್ಯ ಜ್ಞಾನ ಪತ್ರಿಕೆಯ ಪರೀಕ್ಷೆಯಲ್ಲಿ ಈ ಘಟನೆ ಜರುಗಿದೆ.
ಪರೀಕ್ಷಾ ಕೇಂದ್ರದಲ್ಲಿ ಆರೋಪಿ ಪರೀಕ್ಷಾರ್ಥಿ ಬಳಿ ಸಿಕ್ಕಿರುವ ನಕಲು ಚೀಟಿ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗೆ ಹೋಲಿಕೆ ಆಗುತ್ತಿದೆ ಎನ್ನಲಾಗಿದೆ. ಹೀಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆಯೇ ಎಂಬ ಅನುಮಾನವೂ ಇದ್ದು, ಪೊಲೀಸರು ತನಿಖೆ ಚುರುಕೊಗೊಳಿದ್ದಾರೆ.
ಪರೀಕ್ಷಾರ್ಥಿ ಹಾಗೂ ನಕಲು ಪೂರೈಕೆ ಮಾಡಿದ ಕಾಲೇಜಿನ ಜವಾನ ಹಾಗೂ ಪರೀಕ್ಷಾರ್ಥಿಯ ಇನ್ನಿಬ್ಬರು ಸಹವರ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.
