ಅಹಮದಾಬಾದ್: ಪ್ರವಾಸಿ ಇಂಗ್ಲೇಂಡ್ ವಿರುದ್ಧ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ 3-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೇಂಡ್ ವಿರುದ್ಧ ಇನ್ನಿಂಗ್ಸ್ ಹಾಗೂ 25 ರನ್ ಗಳ ಅಂತರದಿಂದ ಭಾರತ ಗೆಲುವು ಸಾಧಿಸಿದೆ.
ಇನ್ನು ಟಾಸ್ ಗೆದ್ದು ಮೊದಲ ಇನ್ನಿಂಗ್ಸ್ ಆರಂಭಿಸಿದ ಅಂಗ್ಲಪಡೆ ಟೀಂ ಇಂಡಿಯಾ ಬೌಲರ್ ಗಳ ದಾಳಿಗೆ ತತ್ತರಿಸಿ 205 ರನ್ ಗಳಿಗೆ ಆಲ್ ಔಟ್ ಆಯಿತು. ಪ್ರಥಮ ಇನ್ನಿಂಗ್ಸ್ ನಲ್ಲಿ ಇಂಗ್ಲೇಂಡ್ ಪರ ಬೆನ್ ಸ್ಟೋಕ್ಸ್ 55, ಲಾರೆನ್ಸ್ 46, ಬ್ರಿಸ್ಟೋ 28 ರನ್ ಗಳಿಸಿದ್ದು ಬಿಟ್ಟರೆ ಬೇರೆ ಆಟಗಾರರಿಂದ ಉತ್ತಮ ಸಾಥ್ ಸಿಗಲಿಲ್ಲ. ಇನ್ನು ಟೀಂ ಇಂಡಿಯಾ ಪರ ಆರ್.ಅಶ್ವಿನ್ 4 ಹಾಗೂ ಅಕ್ಷರ್ ಪಟೇಲ್ 3 ವಿಕೆಟ್ ಕಬಳಿಸಿ ಮಿಂಚಿದರು.
ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, ರೋಹಿತ್ ಶರ್ಮಾ 49, ರಿಷಬ್ ಪಂತ್ 101, ವಾಶಿಂಗ್ ಟನ್ ಸುಂದರ್ 96 ರನ್ ಗಳ ನೆರವಿನಿಂದ 365 ರನ್ ಬಾರಿಸಿತು. ಈ ಮೂಲಕ 160 ರನ್ ಮುನ್ನಡೆ ಸಾಧಿಸಿತು. ನಂತರ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಆಂಗ್ಲಪಡೆ ಕೇವಲ 135 ರನ್ ಗೆ ಆಲ್ ಔಟ್ ಆಗಿ ಸೋಲನ್ನೊಪ್ಪಿಕೊಂಡಿತು.ಟೀಂ ಇಂಡಿಯಾ ಪರ ಆರ್.ಅಶ್ವಿನ್ 5 ಅಕ್ಷರ್ ಪಟೇಲ್ 5 ವಿಕೆಟ್ ಕಬಳಿಸಿ ಎರಡನೇ ಇನ್ನಿಂಗ್ಸ್ ನಲ್ಲೂ ಮಿಂಚಿದರು. ‘
ಈ ಮೂಲಕ 3-1 ಅಂತರದಲ್ಲಿ ಸರಣಿ ವಶಪಡಿಸಿಕೊಳ್ಳುವ ಮೂಲಕ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸಿದ್ದು ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್ ಆಡಲಿದೆ.
