March 24, 2021
Public Voice
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

`ಈಶ್ವರವನ’ದಲ್ಲಿ ಮಾ.11 ರಂದು ಮಹಾ ಶಿವರಾತ್ರಿ ಆಚರಣೆ…

ಶಿವಮೊಗ್ಗ,ಮಾ.9:ಅಬ್ಬಲಗೆರೆ ಸಮೀಪದ `ಈಶ್ವರವನ’ದಲ್ಲಿ ಶಿವರಾತ್ರಿ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಮಾ.11 ರಂದು ಬೆಳಿಗ್ಗೆ 6ರಿಂದ ತಡರಾತ್ರಿಯವರೆಗೆ ಮಹಾ ಶಿವರಾತ್ರಿ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಗುವುದು ಎಂದು ಈಶ್ವರವನದ ಮುಖ್ಯಸ್ಥ ಎಂ.ವಿ.ನಾಗೇಶ್ ನವ್ಯಶ್ರೀ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಕೃತಿಯ ಪ್ರತಿರೂಪ, ವೃಕ್ಷಪತಿ, ಪಶುಪತಿ ಎಂದೆಲ್ಲಾ ನಾಮಾಂಕಿತನಾಗಿರುವ ಶಿವನ ಆರಾಧನೆ ಎಂದರೆ ಪ್ರಕೃತಿಯ ಆರಾಧನೆ ಎಂದೇ ಅರ್ಥ. ಕೇವಲ ಧಾರ್ಮಿಕವಲ್ಲದೆ ವೈಜ್ಞಾನಿಕ ಹಿನ್ನಲೆಯಲ್ಲೂ ಕೂಡ ಹಬ್ಬ ಆಚರಿಸಲಾಗುತ್ತಿದೆ. ವಿಶೇಷವಾಗಿ ಪ್ರಕೃತಿಯನ್ನು ಉಳಿಸುವ ನಿಟ್ಟಿನತ್ತ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಈಶ್ವರವನದಲ್ಲಿ 2ಎಕರೆ ಪ್ರದೇಶದಲ್ಲಿ ಅಳಿವಿನಂಚಿಲ್ಲಿರುವ ಪ್ರಭೇದÀಗಳು ಸೇರಿದಂತೆ 120 ಪ್ರಭೇದದ 800ವೃಕ್ಷಗಳನ್ನು ಬೆಳೆಸಲಾಗಿದೆ. ಕಾಡನ್ನು ಉಳಿಸುವ ನಿಟ್ಟಿನಲ್ಲಿ ಪ್ರಕೃತಿ ಪ್ರೇಮವನ್ನು ಬಿಂಬಿಸಲಾಗಿದೆ. ಶಿವನ ದೇವಾಲಯ ನಿರ್ಮಿಸಲಾಗಿದ್ದು, ವಿಶೇಷ ಪೂಜೆ ಮಾಡಲಾಗುತ್ತಿದೆ. ಶಿವರಾತ್ರಿಯಂದು ರುದ್ರಾಭಿಷೇಕ, ಭಜನೆ, ಪ್ರವಚನ, ಶಿವಸ್ತುತಿ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಶಿವನನ್ನು ಕೇವಲ ಡಂಬಾಚಾರಕ್ಕಾಗಿ ಪೂಜಿಸಬಾರದು. ಅಳಿವಿನ ಅಂಚಿನಲ್ಲಿರುವ ಕಾಡನ್ನು, ಪ್ರಕೃತಿಯನ್ನು ಉಳಿಸಲು ಮಾಡಬಹುದಾದ ಕಾರ್ಯವೇ ನಿಜವಾದ ಶಿವ ಪೂಜೆ. ಹಾಗಾಗಿ ಈಶ್ವರವನ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ವಿಶೇಷವಾಗಿದೆ ಎಂದರು.
ಅಂದು ಬೆಳಿಗ್ಗೆ 7ಗಂಟೆಗೆ ಪೂಜಾ ಹಾಗೂ ರುದ್ರಾಭಿಷೇಕ ಕಾರ್ಯಕ್ರಮ. ಸಾರ್ವಜನಿಕರಿಗೆ ಮುಕ್ತವಾಗಿ ಅಭಿಷೇಕ ಮಾಡಲು ಅವಕಾಶವಿದೆ. 8 ಗಂಟೆಯಿಂದ ಸಂಜೆ 6 ರ ವರೆಗೆ ಶಬರೀಶ್ ಕಣ್ಣನ್ ನೇತೃತ್ವದಲ್ಲಿ ಭಜನಾ ಪರಿಷತ್ ವತಿಯಿಂದ ನಿರಂತರ ಭಜನಾ ಕಾರ್ಯಕ್ರಮ ಸಂಜೆ 6ರಿಂದ ವಿದ್ವಾನ್ ಹಂದಲಸು ವಾಸುದೇವ ಭಟ್‍ರವರಿಂದ ಪ್ರಕೃತಿ ಮತ್ತು ಶಿವ ಕುರಿತು ಪ್ರವಚನ, ರಾತ್ರಿ 8ಕ್ಕೆ ಪರಿಸರದ ಕುರಿತಂತೆ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಸನ್ಮಾನ, 9ಗಂಟೆ ಯಿಂದ ವಿದ್ವಾನ್ ಶೃಂಗೇರಿ ನಾಗರಾಜ್ ನೇತೃತ್ವದಲ್ಲಿ ಗುರುಗುಹ ಸಂಗೀತ ವಿದ್ಯಾಲಯದವರಿಂದ ಶಿವಸ್ತುತಿ ಕಾರ್ಯಕ್ರಮ ನಡೆಯಲಿದ್ದು ಸರ್ವರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.
ಈಶ್ವರವನಕ್ಕೆ ಬರಲು ಅನುಕೂಲವಾಗುವಂತೆ ಬೆಳಿಗ್ಗೆ 6 ಗಂಟೆಯಿಂದ ಪ್ರತಿ ಗಂಟೆಗೊಮ್ಮೆ ಉಷಾ ನರ್ಸಿಂಗ್ ಹೋಂನಿಂದ ಉಚಿತ ವಾಹನದ ವ್ಯವಸ್ಥೆ ಮಾಡಲಾಗಿದೆ. ಶಿವನಿಗೆ ಭಕ್ತಿಯೇ ಕಾಣಿಕೆ. ಕಾಣಿಕೆಗೆ ಅವಕಾಶವಿಲ್ಲ. ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಕ್ಕೆ ಆಗಮಿಸಿ, ಪ್ರಕೃತಿ ಪ್ರೇಮಿಗಳಾಗಲು ಪ್ರೇರೇಪಣೆ ಹೊಂದಬೇಕು ಎಂದು ಮನವಿ ಮಾಡಿದರು.
ಈಶ್ವರವನದಿಂದ ಪ್ರೇರಣೆ ಪಡೆದು ಹಲವಾರು ವೃತ್ತಿಗಳಿಂದ ವನ ನಿರ್ಮಾಣವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರು ಈಶ್ವರವನಕ್ಕೆ ಭೇಟಿ ನೀಡಿ ಪ್ರಭಾವಿತರಾಗಿ ಬಿದರೆ ಸಮೀಪದ ತಮ್ಮ ಸ್ವಂತ 2 ಎಕರೆ ಪ್ರದೇಶದಲ್ಲಿ ವನ ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ. ಅಲ್ಲದೆ, ತುಂಗಾ ಮೇಲ್ದಂಡೆ ಯೋಜನೆಯ ಪ್ರದೇಶದ 15 ಕಿ.ಮೀ. ವ್ಯಾಪ್ತಿಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ 60 ಸಾವಿರ ಗಿಡ ನೆಡುವ ಬೃಹತ್ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಿನೇಶ್, ಶ್ರೀಧರ್, ಬಾಲು, ಗಣೇಶ್, ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.

Related posts

ಡಿಪ್ಲೊಮೋ, ಎಂಜಿನಿಯರಿಂಗ್, ಪದವಿ ಶಿಕ್ಷಣ ಸಂಸ್ಥೆಗಳಿಗೆ ಪೂರ್ಣ ಸ್ವಾಯತ್ತತೆ ನೀಡಲು ಸರಕಾರ ಸಿದ್ಧ- ಡಿಸಿಎಂ ಅಶ್ವಥ್ ನಾರಾಯಣ್…

Public Voice

ಅತಿಥಿ ಉಪನ್ಯಾಸಕರ ಸೇವೆಯನ್ನು ಮುಂದುವರೆಸಲು ವಿಳಂಭ ಧೋರಣೆ: ಪ್ರತಿಭಟನೆ ನಡೆಸಿ ಮನವಿ ಸಲ್ಲಿಕೆ

Public Voice

ನಮ್ಮೂರಿಗೆ ಅಕೇಶಿಯಾ ಬೇಡ ಹೋರಾಟ ತೀವ್ರ: ಅರಣ್ಯ ಅಧಿಕಾರಿಗಳು,ಪೊಲೀಸರ ನಡುವೆ ಮಾತಿನ ಚಕಮಕಿ…

Public Voice