ಮೂಡಿಗೆರೆ, ಮಾ.9: ಮಹಿಳೆಯರಲ್ಲಿ ಜ್ಞಾನದ ಜತೆಗೆ ಇಚ್ಚಾಸಕ್ತಿ ಇದ್ದರೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲೀಕರಣವಾಗಲು ಸಾಧ್ಯವಾಗುತ್ತದೆ ಎಂದು ತಾ.ಪಂ. ಅಧ್ಯಕ್ಷೆ ಭಾರತೀ ರವೀಂದ್ರ ಹೇಳಿದರು.
ಅವರು ಸೋಮವಾರ ಪಟ್ಟಣದ ಜ್ಞಾನಾಮೃತ ಭವನದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ 85ನೇ ತ್ರಿಮೂರ್ತಿ ಶಿವಜಯಂತಿ ಮಹೋತ್ಸವ ಶಿವ ವರದಾನಗಳ ಅಮೃತವರ್ಷ 33ನೇ ವಾರ್ಷಿಕೋತ್ಸವ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾನವನ ಮನಸ್ಸು ಸದಾ ಶಾಂತಿಯಿಂದ ಕೂಡಿದ್ದರೆ ಮಾತ್ರ ಸೌಹಾರ್ಧತೆ ಜೀವನ ನಡೆಸಲು ಸಾಧ್ಯವಾಗುತ್ತದೆ. ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ಮೂಡಿಸಲು ಬ್ರಹ್ಮ ಕುಮಾರೀಸ್ನಲ್ಲಿ ಸಾಧ್ಯವಿದೆ ಎಂದ ಅವರು, ಮಹಿಳೆಯರಿಗೆ ಪುರುಷರಷ್ಟೇ ಸ್ವಾತಂತ್ರವಿದೆ. ಸರಕಾರ ನೀಡಿರುವು ಶೇ.50 ರಷ್ಟು ಮೀಸಲಾತಿಯನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಂಡು ಸುಖೀ ಹಾಗೂ ಸೌಹಾರ್ಧತೆ ಜೀವನ ನಡೆಸುವಂತಾಗಬೇಕೆಂದು ಹೇಳಿದರು.
ಪ.ಪಂ. ಉಪಾಧ್ಯಕ್ಷ ಕೆ.ಸುಧೀರ್, ಬ್ರಹ್ಮಕುಮಾರಿಸ್ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬಿ.ಕೆ.ಭಾಗ್ಯಕ್ಕ, ಎಂಜಿಎಂ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಿ.ಎಸ್.ಶಾಂಭವಿ, ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಪೂರ್ಣೇಶ್ವರಿ ಲಕ್ಷ್ಮಣ್ಗೌಡ, ವಿವೇಕ ಜಾಗೃತಿ ಬಳಗದ ಅಧ್ಯಕ್ಷ ಶ್ರೇಷ್ಠಿ ಮತ್ತಿತರರು ಉಪಸ್ಥಿತರಿದ್ದರು.
