March 16, 2021
Public Voice
  • Home
  • ಮುಖ್ಯಾಂಶಗಳು
  • ರಸ್ತೆ ಕಾಮಗಾರಿ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚನೆ
ಚಿಕ್ಕಮಗಳೂರು ಜಿಲ್ಲೆ ಮುಖ್ಯಾಂಶಗಳು

ರಸ್ತೆ ಕಾಮಗಾರಿ ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚನೆ

ಚಿಕ್ಕಮಗಳೂರು,ಮಾ.೧೦: ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್‌ಗಳ ಕಾಮಗಾರಿಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.
ಅವರು ನಿನ್ನೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು ಅಂತಹ ವಲಯಗಳನ್ನು ಗುರುತಿಸಿ ಆ ಸ್ಥಳವು ಬ್ಲಾಕ್ ಸ್ಪಾಟ್ ಪಟ್ಟಿಯಲ್ಲಿ ಇಲ್ಲದಿದ್ದರೂ ಸಹ ಅಪಘಾತವನ್ನು ನಿಯಂತ್ರಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು ರಸ್ತೆಗೆ ಸಂಬಂಧಿಸಿದ ಇತರೆ ಕಾಮಗಾರಿಗಳನ್ನು ಸಹ ವಿಳಂಬವಾಗದ ರೀತಿಯಲ್ಲಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮೂಡಿಗೆರೆ ಮತ್ತು ಕಡೂರು ತಾಲ್ಲೂಕಿನಲ್ಲಿ ಟ್ರೋಮಾ ಸೆಂಟರ್‌ಗಳು ೨ ಮಾತ್ರ ಇದ್ದು, ರಸ್ತೆ ಸುರಕ್ಷತೆಯಲ್ಲಿ ಟ್ರೋಮಾ ಸೆಂಟರ್‌ಗಳು ತುಂಬಾ ಮುಖ್ಯವಾಗಿದ್ದು, ಇನ್ನೂ ಹೆಚ್ಚಿನ ಟ್ರೋಮಾ ಸೆಂಟರ್‌ಗಳನ್ನು ಪ್ರಾರಂಭಿಸಲು ತಿಳಿಸಿದ ಅವರು ಜಿಲ್ಲೆಯಲ್ಲಿ ಎಲ್ಲೆಲ್ಲಿ ಹೆಚ್ಚು ಅಪಘಾತ ವಲಯಗಳಿವೆ ಎಂಬುದರ ಬಗ್ಗೆ ಸಮೀಕ್ಷೆ ಕೈಗೊಂಡು ಸ್ಥಳಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯವಿರುವ ಪ್ರದೇಶಗಳಲ್ಲಿ ಟ್ರೋಮಾ ಸೆಂಟರ್‌ಗಳನ್ನು ಪ್ರಾರಂಭಿಸುವಂತೆ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್.ಎಂ.ಹೆಚ್ ಮಾತನಾಡಿ, ಜಿಲ್ಲೆಯಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಕಾಮಗಾರಿ ಪೂರ್ಣಗೊಳಿಸಿದ್ದರೂ ಸಹ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಮುಖ್ಯವಾಗಿ ರಸ್ತೆಯ ತಿರುವುಗಳಲ್ಲಿ ಮುಖ್ಯವಾಗಿ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಅಪಘಾತಗಳನ್ನು ಕಡಿಮೆಗೊಳಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ಒಟ್ಟು ೨೧ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದ್ದು, ಇವುಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಸರಿಯಾದ ಯೋಜನೆ ರೂಪಿಸಿ ಕಾಮಗಾರಿ  ನಿರ್ವಹಿಸಿಲ್ಲ. ಬ್ಲಾಕ್ ಸ್ಪಾಟ್‌ಗಳನ್ನು ಕಡಿಮೆಯಾಗಿ ಇನ್ನಷ್ಟು ಉತ್ತಮ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲೆಯ ಮುಖ್ಯ ರಸ್ತೆಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವುದಕ್ಕಿಂತ ಮುಖ್ಯವಾಗಿ ರಸ್ತೆಯಲ್ಲಿ ಸ್ಪೀಡ್ ಬ್ರೇಕರ್ ಹಾಗೂ ಹಂಪ್ಸ್‌ಗಳನ್ನು ಅಳವಡಿಸುವುದರ ಮೂಲಕ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದ ಅವರು ಮುಖ್ಯ ರಸ್ತೆಗಳಿಗೆ ಹಳ್ಳಿಗಳನ್ನು ಸಂಪರ್ಕಿಸುವ ಕಡೆಗಳಲ್ಲಿ ಹಂಪ್ಸ್‌ಗಳನ್ನು ಅಳವಡಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಮಾರ್ಚ್ ೧೫ ರ ನಂತರ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲೆಯಲ್ಲಿನ ಬ್ಲಾಕ್ ಸ್ಪಾಟ್‌ಗಳ ಕಾಮಗಾರಿಯ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಜಿಲ್ಲಾ ರಸ್ತೆಗಳಲ್ಲಿರುವ ಬ್ಲಾಕ್ ಸ್ಪಾಟ್‌ಗಳು ಮತ್ತು ಅವುಗಳ ಕಾಮಗಾರಿಗಳ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ಮುರುಗೇಂದ್ರ ಬಿ.ಶಿರೋಳ್ಕರ್ ಮಾಹಿತಿ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಹೆಚ್.ಎಲ್.ನಾಗರಾಜ್, ನಗರಸಭೆ ಪೌರಯುಕ್ತ ಬಿ.ಸಿ.ಬಸವರಾಜ್ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜೇಶ್  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

ಧರಣಿನಿರತ ರೈತರಿಂದ ದೆಹಲಿ ಕೆಂಪುಕೋಟೆಗೆ ಮುತ್ತಿಗೆ: ಧ್ವಜಾರೋಹಣ….

Public Voice

ಜ.26ರ ರೈತರ ಟ್ರ್ಯಾಕ್ಟರ್ ರ್ಯಾಲಿಗೆ ತಡೆ ನೀಡಲು ಸುಪ್ರೀಂ ನಕಾರ: ಅರ್ಜಿ ವಾಪಸ್…

Public Voice

ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದ ರಾಷ್ಟ್ರಪತಿ ರಾಮನಾಥ್ ಕೋವಿಂದ್

Public Voice