March 15, 2021
Public Voice
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ ಸಿನಿಮಾ

ಡಿ ಬಾಸ್ ಅಭಿನಯದ ‘ರಾಬರ್ಟ್’ ಗೆ ಭರ್ಜರಿ ಓಪನಿಂಗ್…

ಶಿವಮೊಗ್ಗ,ಮಾ.11: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ರಾಬರ್ಟ್’ ನಗರದಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.

ನಗರದ ವೀರಭದ್ರೇಶ್ವರ ಚಿತ್ರಮಂದಿರ ಮತ್ತು ಮಂಜುನಾಥ ಚಿತ್ರಮಂದಿರದಲ್ಲಿ 4 ಪ್ರದರ್ಶನ ಹಾಗೂ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನ ಹಾಗೂ ಮಾಲ್‍ನಲ್ಲಿರುವ ಭಾರತ್ ಸಿನಿಮಾಸ್‍ನಲ್ಲೂ ಚಿತ್ರ ಪ್ರದರ್ಶನ ಆಯೋಜಿಸಲಾಗಿದೆ.

ಬೆಳಿಗ್ಗೆ 7 ಗಂಟೆಗೆ ಫ್ಯಾನ್ಸ್ ಷೋ (ಅಭಿಮಾನಿಗಳಿಗಾಗಿ, ಸಿನಿ ರಸಿಕರಿಗೆ ವಿಶೇಷ ಪ್ರದರ್ಶನ) ಏರ್ಪಡಿಸಲಾಗಿತ್ತು. ದರ್ಶನ್ ಕಟೌಟ್‍ಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬೃಹತ್ ಗಾತ್ರದ ಹಾರಗಳನ್ನು ಹಾಕಿ ಕುಣಿದು ಕುಪ್ಪಳಿಸಿದರು. ನೆಚ್ಚಿನ ನಟ ಡಿ ಬಾಸ್ ದರ್ಶನ್ ಸಿನಿಮಾ ನೋಡಲು ಬರುವವರು ಉಪವಾಸ ಇರದಂತೆ ದರ್ಶನ್ ಅಭಿಮಾನಿಗಳು ಉಪಹಾರದ ವ್ಯವಸ್ಥೆ ಮಾಡಿದ್ದರು.

ಬಹು ದಿನಗಳ ಹಿಂದೆಯೇ ರಾಬರ್ಟ್ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು. ಶಿವರಾತ್ರಿಯಂದು ರಾಬರ್ಟ್ ರಿಲೀಸ್ ಆಗಿರುವುದು ಅಭಿಮಾನಿಗಳ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.
ರಾತ್ರಿಯಿಂದಲೇ ಚಿತ್ರಮಂದಿರಗಳ ಬಳಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಕಟ್ಟಿ ಚಿತ್ರಮಂದಿರವನ್ನು ಅಲಂಕರಿಸಲಾಗಿತ್ತು. ಟಿಕೇಟ್‍ಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದರು. ಆನ್‍ಲೈನ್‍ನಲ್ಲಿ ಟಿಕೇಟ್ ಸೋಲ್ಡ್‍ಔಟ್ ಆಗಿದ್ದು, ನೂಕುನುಗ್ಗಲಿನಲ್ಲಿ ಜನ ಸಿನಿಮಾ ನೋಡಿದ್ದಾರೆ. ಮೊದಲ ಷೋ ನೋಡಿ ಬಂದವರ ಸಂಭ್ರಮ ಹೇಳತೀರದಾಗಿತ್ತು. ಮೊದಲ ದಿನವೇ ಮೊದಲ ಷೋ ನೋಡಬೇಕೆಂಬ ಬಯಕೆ ಈಡೇರಿಸಿಕೊಂಡ ಅಭಿಮಾನಿಗಳು ಸಂಭ್ರಮಿಸಿದರು.

ಒಟ್ಟಾರೆ ನಗರದಲ್ಲಿ ರಾಬರ್ಟ್ ಹವಾ ಜೋರಾಗಿದ್ದು,  ಟಿಕೇಟ್ ಬೆಲೆ ಹೆಚ್ಚಾಗಿದ್ದರೂ ಅಭಿಮಾನಿಗಳ ಸಂಭ್ರಮಕ್ಕೆ ಭಂಗವಾಗಿಲ್ಲ. ರಾಬರ್ಟ್ ನಗರದಲ್ಲಿ ಬಿಡುಗಡೆಯಾದ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಂದ ಹಾಗೆ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಒಂದು ಸಿನಿಮಾ ಬಿಡುಗಡೆಯಾಗಿರುವುದು ಶಿವಮೊಗ್ಗದ ಮಟ್ಟಿಗೆ ದಾಖಲೆಯಾಗಿದೆ.

ಚಿತ್ರದ ನಾಯಕಿಯಾಗಿ ನಟಿಸಿರುವ ಆಶಾ ಭಟ್ ಜಿಲ್ಲೆಯವರೆ ಆಗಿರುವುದು ವಿಶೇಷವಾಗಿದೆ. ಭದ್ರಾವತಿಯ ಆಶಾ ಭಟ್ ಅವರಿಗೆ ಇದು ನಾಯಕಿಯಾಗಿ ಮೊದಲ ಚಿತ್ರ ಇದಾಗಿದೆ. ಮಿಸ್ ಸುಪ್ರ ಇಂಟರ್‍ನ್ಯಾಷನಲ್ ಅವಾರ್ಡ್ ವಿನ್ನರ್ ಆಗಿದ್ದಾರೆ.

Related posts

ನಗರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

Public Voice

ಬಿಜೆಪಿ ಸರಕಾರದಿಂದ ರಾಜ್ಯದ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ: ಎಫ್.ಎಚ್.ಜಕ್ಕಪ್ಪನವರ

Public Voice

ಸಿಪಿವೈ ವಿರುದ್ಧ ಹೈಕಮಾಂಡ್ ಗೆ ದೂರು ನೀಡಿದ ಶಾಸಕ ಎಂ.ಪಿ ರೇಣುಕಾಚಾರ್ಯ…

Public Voice