ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಚುಟುಕು ಕ್ರಿಕೆಟ್ ಗೆ ಸಜ್ಜಾಗಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐದು ಟಿ-20 ಪಂದ್ಯಗಳ ಮೊದಲ ಪಂದ್ಯ ಶುಕ್ರವಾರ ನಡೆಯಲಿದೆ.
ಟೆಸ್ಟ್ ಸರಣಿಯನ್ನು ಸೋತಿರುವ ಇಂಗ್ಲೆಂಡ್, ಹೊಸ ಹುಮ್ಮಸ್ಸಿನೊಂದಿಗೆ ಆತಿಥೇಯ ತಂಡಕ್ಕೆ ಸವಾಲು ಎಸೆಯಲಿದೆ. ಪ್ರವಾಸಿ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಗಳು ತಂಡಕ್ಕೆ ಮರಳಿರುವುದು ತಂಡಕ್ಕೆ ಆನೆ ಬಲ ನೀಡಿದೆ. ಟೀಮ್ ಇಂಡಿಯಾ ಸಹ ಚುಟುಕು ಫಾರ್ಮೆಟ್ ನಲ್ಲಿ ತನ್ನ ಛಾಪು ಮೂಡಿಸಲು ತುದಿಗಾಲಿನಲ್ಲಿ ನಿಂತಿದೆ.
ಟೆಸ್ಟ್ ಸರಣಿಯ ಎರಡೂ ಪಂದ್ಯದಲ್ಲಿ ಪಿಚ್ ಸ್ಪಿನ್ ಬೌಲರ್ ಗಳಿಗೆ ನೆರವಾಗಿದ್ದು, ಟಿ-20 ಪಂದ್ಯದಲ್ಲಿ ಪಿಚ್ ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಟೀಮ್ ಇಂಡಿಯಾದ ಪರ ಯಾರು ಆರಂಭೀಕರಾಗಿ ಕಣಕ್ಕೆ ಇಳಿಯುತ್ತಾರೆ ಎಂಬ ಪ್ರಶ್ನೆ ಮೂಡಿದೆ. ರೋಹಿತ್ ಶರ್ಮಾ ಅವರೊಂದಿಗೆ ಕೆ.ಎಲ್ ರಾಹುಲ್ ಅಥವಾ ಶಿಖರ್ ಧವನ್ ಆರಂಭಿಕರಾಗಿ ಇಳಿಯುವ ಸಾಧ್ಯತೆ ಇದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಬಲ ತುಂಬಲಿದ್ದಾರೆ.
ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಆಡುವ 11ರ ಬಳಗದಲ್ಲಿ ಸ್ಥಾನ ಸಿಗುತ್ತದೆಯೇ ಎಂದು ಕಾದು ನೋಡಬೇಕಿದೆ. ಇನ್ನು ಆಲ್ ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡರೆ ಬೌಲಿಂಗ್ ನಲ್ಲಿ ದೀಪಕ್ ಚಹಾರ್, ವರುಣ್ ಚಕ್ರವರ್ತಿ, ವಾಷ್ಟಿಂಗ್ಟನ್ ಸುಂದರ್, ಯುಜುವೇಂದ್ರ ಚಹಾಲ್ ಅವರಲ್ಲಿ ಯಾರಿಗೆ ಸ್ಥಾನ ಲಭಿಸುತ್ತದೆ ಕಾದು ನೋಡಬೇಕಿದೆ.
ಇನ್ನು ಆಸ್ಟ್ರೇಲಿಯಾ ನೆಲದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಟಿ.ನಟರಾಜನ್, ನವದೀಪ್ ಸೈನಿ ಮೈದಾನಕ್ಕೆ ಇಳಿಯುವ ಕನಸಿನಲ್ಲಿದ್ದಾರೆ. ಅನುಭವಿ ಭುವನೇಶ್ವರ್ ಕುಮಾರ್ ಹಾಗೂ ಶಾರ್ದುಲ್ ಠಾಕೂರ್ ಸಹ ವಿಕೆಟ್ ಬೇಟೆ ನಡೆಸಿ ರನ್ ಗಳಿಗೆ ಕಡಿವಾಣ ಹಾಕಬೇಕಿದೆ.
ಟೀಮ್ ಇಂಡಿಯಾ ಸಂಪೂರ್ಣ ತಂಡ
ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್, ರಿಷಭ್ ಪಂತ್ (ವಾರ), ಇಶಾನ್ ಕಿಶನ್ (ವಾರ), ಯುಜ್ವೇಂದ್ರ ಚಾಹಲ್, ವರುಣ್ ಚಕ್ರವರ್ತಿ, , ವಾಷಿಂಗ್ಟನ್ ಸುಂದರ್, ರಾಹುಲ್ ತಿವಾಟಿಯಾ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ, ಶಾರ್ದುಲ್ ಠಾಕೂರ್.
ಇಂಗ್ಲೆಂಡ್ ಸಂಪೂರ್ಣ ತಂಡ
ಇಯಾನ್ ಮಾರ್ಗನ್ (ನಾಯಕ), ಮೊಯೀನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್ಸ್ಟೋವ್ (ವಿಕೆಟ್ ಕೀಪರ್), ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರ್ರನ್, ಟಾಮ್ ಕರ್ರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲೆ, ಮಾರ್ಕ್ ವುಡ್.
