ಶಿವಮೊಗ್ಗ,ಮಾ.13: ಸಚಿವ ಕೆ.ಎಸ್.ಈಶ್ವರಪ್ಪ ಇಂದು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹಾಗೂ ಕಾರ್ಪೋರೇಟರ್ಗಳು, ಆಯುಕ್ತರು ಅಧಿಕಾರಿಗಳೊಂದಿಗೆ ನಗರದ ವಿವಿಧ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲೀಸಿದ ಅವರು ಸ್ಥಳದಲ್ಲೇ ಪರಿಹಾರಕ್ಕೆ ಸೂಚನೆ ನೀಡಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ ಮೊದಲಾದ ಕಾಮಗಾರಿಗಳು ನಡೆಯುತ್ತಿವೆ. ಅನೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವೆಡೆ ಕಾಮಗಾರಿಗಳಿಂದ ಸಮಸ್ಯೆ ಉಂಟಾಗಿದೆ. ಸ್ವಚ್ಚತೆ, ನೀರಿನ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಜನರಿಗೆ ತೊಂದರೆಯಾಗಿದೆ. ಇದರ ಬಗ್ಗೆ ಬಡಾವಣೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರಿಗೆ ಸ್ಥಳೀಯ ನಿವಾಸಿಗಳು ದೂರು ನೀಡಿದರು.
ಮನವಿ ಆಲಿಸಿದ ಸಚಿವರು ಕೂಡಲೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಈಶ್ವರಪ್ಪ, ನಗರದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ ಕಾಮಗಾರಿಗಳು ಮುಕ್ತಾಯವಾಗಿವೆ. ಇನ್ನು ಹಲವು ಕಾಮಗಾರಿ ನಡೆಯುತ್ತಿದೆ. ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.
ಯಾವ ಭಾಗದಲ್ಲಿ ಏನೇನೂ ಸಮಸ್ಯೆಗಳಿವೆ ಎಂಬುದನ್ನು ಜನರಿಂದಲೇ ಮಾಹಿತಿ ಪಡೆದು ಸರಿ ಪಡಿಸಲಾಗುತ್ತಿದೆ. ಎಲ್ಲಾ ಅಗತ್ಯ ಮೂಲ ಸೌಕರ್ಯ ಒದಗಿಸುವ ಜೊತೆಗೆ ನಾಗರೀಕರಿಗೆ ಅನುಕೂಲ ಕಲ್ಪಿಸಲಾಗುವುದು. ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದ ಅವರು ನನ್ನ ಹೆಸರಿನಲ್ಲಿ ಬಡಾವಣೆ ಬೇಡ. ಜನರ ಪ್ರೀತಿ ಆಶೀರ್ವಾದ ಸಾಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್, ಆಯುಕ್ತ ಚಿದಾನಂದ ವಟಾರೆ ಹಾಗೂ ಸ್ಥಳೀಯ ಪಾಲಿಕೆ ಸದಸ್ಯರು ಇದ್ದರು.
