ಶಿವಮೊಗ್ಗ: ಈ ಭಾಗದ ಮಹಿಳೆಯರ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಅಂದಿನ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸೇವಕರು ಅತ್ಯಂತ ಕಷ್ಟ ಪಟ್ಟು ರಾಷ್ಟ್ರೀಯ ಶಿಕ್ಷಣ ಸಮಿತಿಯನ್ನು ಹುಟ್ಟು ಹಾಕಿದರು ಎಂದು ಅದರ ಉಪಾಧ್ಯಕ್ಷರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಹೇಳಿದರು.
ಅವರು ಇಂದು ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಆಯೋಜಿಸಿದ್ದ “ರಾಷ್ಟ್ರೀಯ ಶಿಕ್ಷಣ ಸಮಿತಿ ಸ್ಥಾಪಕರ ದಿನಾಚರಣೆ”ಲಯನ್ನುದ್ಧೇಶಿಸಿ ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ರುದ್ರಪ್ಪನವರು, ಎಸ್.ಆರ್.ನಾಗಪ್ಪ ಶೆಟ್ಟಿ, ಗಿರಿಮಾಜಿ ರಾಜಗೋಪಾಲವರಂಥಹ ಮಹನೀಯರು ಅಂದಿನ ಕಷ್ಟ ಕಾಲದಲ್ಲಿ ತಮ್ಮ ತಮ್ಮ ಜೇಬಿನಿಂದ ಹಣ ಹಾಕಿ ಮಹೋನ್ನತ ಧ್ಯೇಯವನ್ನಿಟ್ಟುಕೊಂಡು ರಾ.ಶಿ.ಸಮಿತಿಯನ್ನು ಸ್ಥಾಪಿಸಿದರು. ಇಂದು ಈ ಸಂಸ್ಥೆಯು 45ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳನ್ನು ಹೊಂದಿದ್ದು, ಇದರಲಿ ್ಲಸುಮಾರು 25 ಸಾವಿರಕ್ಕೂ ಹೆಚ್ಚು ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 1,700ಕ್ಕೂ ಅಧಿಕ ನೌಕರರು ಕೆಲಸ ನಿರ್ವಹಿಸುತ್ತಿದ್ದು ಅವರೆಲ್ಲರಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಸರೆಯಾಗಿದೆ ಎಂದು ತಿಳಿಸಿದರು.
ತಮ್ಮ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಕಲಿಯುತ್ತಿರುವ ಅತ್ಯಂತ ಕಡು ಬಡ ವಿದ್ಯಾರ್ಥಿಗಳಿಗೆ ಕಿಂಚಿತ್ ಸಹಾಯವಾಗುವ ನಿಟ್ಟಿನಲ್ಲಿ ರಾ.ಶಿ.ಸ.ಯಿಂದ ಶಿಷ್ಯವೇತನ ನೀಡುತ್ತಿದ್ದು ಮುಂಬರುವ ವರ್ಷಗಳಲ್ಲಿ ಈ ಮೊತ್ತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯು ಪ್ರಾಮಾಣಿಕತೆಗೆ ಒತ್ತು ನೀಡುತ್ತಿದ್ದು ಯಾವುದೇ ನೇಮಕಾತಿ ಸಂದರ್ಭದಲ್ಲೂ ಯಾವುದೇ ವಶೀಲಿಬಾಜಿಗೆ ಒಳಗಾಗದೆ ಕೇವಲ ವಿದ್ಯಾರ್ಹತೆ, ಶೈಕ್ಷಣಿಕ ಗುಣಮಟ್ಟಗಳ ಆಧಾರಗಳ ಮೇಲೆ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಪ್ರೊ.ಪಿ.ಎನ್.ಎಂ.ಶಂಕರ್ ಅಧ್ಯಕ್ಷತೆ ವಹಿಸಿ, ರಾಷ್ಟ್ರೀಯ ಶಿಕ್ಷಣ ಸಮಿತಿಯು ನಮಗೆಲ್ಲ ಬದುಕಲು, ಸಾಮಾಜಿಕ ಸೇವೆಗೈಯಲು ಒಳ್ಳೆಯ ಅವಕಾಶವನ್ನು ಕಲ್ಪಿಸಿದೆ. ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ರಾಷ್ಟ್ರೀಯ ಶಿಕ್ಷಣ ಸಮಿತಿಯ ಸದಾಶಯಗಳನ್ನು ಈಡೇರಿಸುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಹೆಗಡೆ ರಾ.ಶಿ.ಸಮಿತಿ ನಡೆದು ಬಂದ ದಾರಿಯನ್ನು ವಿವರಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಎ.ಪಿ.ಓಂಕಾರಪ್ಪ, ಉಪನ್ಯಾಸಕರಾದ ಆರಡಿ ಮಲ್ಲಯ್ಯ ಮೊದಲಾದವರಿದ್ದರು. ಕು.ಮೇಘನಾ ಎಸ್.ಬಿ. ಸ್ವಾಗತಿಸಿದರು. ಶುಭಾ ಪೈ ವಂದಿಸಿದರು. ಸ್ವಾತಿ ಎಸ್.ಡಿ.ಕಾರ್ಯಕ್ರಮ ನಿರ್ವಹಿಸಿದರು.
